ಅಮೆರಿಕ ಮೂಕಿ ಚಿತ್ರ ಇತಿಹಾಸದ ಪ್ರಸಿದ್ಧ ಹಾಸ್ಯಗಾರರು. ಸ್ಟಾನ್ ಲಾರೆಲ್ (1890-1965) ಅಂಜುಬುರುಕ. ತುಸು ನಿಸ್ತೇಜ ಹಾಸ್ಯಗಾರನಾಗಿ ನಟಿಸಿದ್ದಾನೆ. ದಪ್ಪನಾದ, ಎಲ್ಲವನ್ನೂ ತಿಳಿದವನಂತೆ ಗೋಳುಹೊಯ್ದುಕೊಳ್ಳುವ ಇವನ ಸಹನಟ ಆಲಿವರ್ ಹಾರ್ಡಿ ಯಾವಾಗಲೂ ಇವನನ್ನು ರೇಗಿಸುತ್ತಿರುತ್ತಾನೆ. ಇವರ ತಂಡ 1926-52ರವರೆಗೆ 60ಕ್ಕಿಂತಲೂ ಹೆಚ್ಚು ಸಣ್ಣ ಸಿನಿಮಾಗಳನ್ನು 27 ಪ್ರಧಾನ ಸಿನಿಮಾಗಳನ್ನು ತಯಾರಿಸಿತು. ಮೂಕಿ ಚಿತ್ರಕಾಲದ ಹಲವಾರು ಪ್ರಸಿದ್ಧ ವ್ಯಕ್ತಿಗಳಿಗಿಂತ ಭಿನ್ನವಾಗಿ ಯಶಸ್ವಿ ಟಾಕಿ ಚಿತ್ರಗಳನ್ನೂ ಇವರು ತಯಾರಿಸಿದರು.

ಲಾರೆಲ್‍ನ ನಿಜನಾಮಧೇಯಆರ್ಥರ್ ಸ್ಟ್ಯಾನ್ಲಿ ಜೆಫರ್‍ಸನ್. ಇಂಗ್ಲೆಂಡ್‍ನ ಆಲಿವರ್ ಸ್ಟೋನ್‍ನಲ್ಲಿ 1890 ರಲ್ಲಿ ಜನಿಸಿದ. ತನ್ನ ವೃತ್ತಿ ಜೀವನವನ್ನು ವಾಡೆವಿಲೆಯಲ್ಲಿ ಪ್ರಾರಂಭಿಸಿದ. 1910ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಬಂದ ಈತ 1917 ರಲ್ಲಿ ತನ್ನ ಮೊದಲ ಚಿತ್ರ ತಯಾರಿಸಿದ. ಆಲಿವರ್ ನಾರ್‍ವೆಲ್ ಹಾರ್ಡಿ ಹಾರ್ಲೆಮನ್‍ನಲ್ಲಿ ಜನಿಸಿದ. 1913 ರಲ್ಲಿ ಪ್ರಥಮವಾಗಿ ಸಣ್ಣ ಹಾಸ್ಯಪಾತ್ರಗಳನ್ನು ಮಾಡಿ, 1918 ರಲ್ಲಿ ಹಾಲಿವುಡ್ ಕಡೆಗೆ ಪ್ರಯಾಣ ಬೆಳೆಸಿದ.  ಲಾರೆಲ್ ಮತ್ತು ಹಾರ್ಡಿ 1926ರಲ್ಲಿ ಮೊದಲಿಗೆ ಜೊತೆಯಾಗಿ ಕೆಲಸ ಮಾಡಿದ ಪುಟ್ಟಿಂಗ್ ಪ್ಯಾಂಟ್ಸ್ ಆನ್ ಫಿಲಿಪ್ ಎಂಬ ಚಿತ್ರ 1927ರಲ್ಲಿ ಬಿಡುಗಡೆಯಾಯಿತು.  ಅನಂತರದ ಇವರ ಚಿತ್ರಗಳೆಂದರೆ ಬೇಬ್ಸ್ ಇನ್ ಟಾಯ್‍ಲೆಂಡ್ (1934), ಸನ್ಸ್ ಆಫ್ ದ ಡೆಸರ್ಟ್ (1934), ವೇ ಔಟ್ ವೆಸ್ಟ್ (1937) ಹಾಗೂ ಬ್ಲಾಕ್‍ಹೆಡ್ಸ್ (1938).	
(ಸಿ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ